ಶಾಂ ಬೆನಗಲ್
	1934-. ಹಿಂದಿಯ ಪ್ರಸಿದ್ಧ ಚಲನಚಿತ್ರ ನಿರ್ದೇಶಕ. 1934ರಲ್ಲಿ ಆಂಧ್ರಪ್ರದೇಶದ ತ್ರಿಮೂಲಗಿರಿ ಎಂಬಲ್ಲಿ ಜನಿಸಿದರು. ಹಿಂದಿ ಚಿತ್ರರಂಗದಲ್ಲಿ ಪ್ರತಿಭಾವಂತರೆಂದು ಹೆಸರಾದ ಗುರುದತ್ತರ ಹತ್ತಿರದ ಸಂಬಂಧಿ. ತೆಲುಗು ಚಿತ್ರರಂಗದಲ್ಲೂ ಇವರು ಪರಿಚಿತರು. ತಮ್ಮ 12ನೆಯ ವಯಸ್ಸಿನಲ್ಲಿ ತಂದೆಯ ಕ್ಯಾಮರಾ ಬಳಸಿ ಮೊದಲ ಹವ್ಯಾಸಿ ಚಿತ್ರ ತಯಾರಿಸಿದರು. ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿದ್ಯಾರ್ಥಿಯಾಗಿದ್ದಾಗಲೇ ನಾಟಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಇವರು ಹೈದರಾಬಾದ್ ಫಿಲಂ ಸೊಸೈಟಿಯ ಸ್ಥಾಪಕರಲ್ಲೊಬ್ಬರು. ಅನಂತರ ಮುಂಬೈಗೆ ವಲಸೆಹೋದ ಇವರು ಲಿಂಟಾಸ್ ಜಾಹಿರಾತು ಸಂಸ್ಥೆ (1959-63), ಅಡ್ವರ್ಟೈಸಿಂಗ್ ಅಂಡ್ ಸೇಲ್ಸ್ ಪ್ರೊಮೋಶನ್ ಕಂಪನಿಯಲ್ಲಿ (1963-73) ಕೆಲಸ ಮಾಡಿದರು. 900ಕ್ಕಿಂತ ಹೆಚ್ಚು ಜಾಹಿರಾತುಗಳನ್ನು, 11ಕ್ಕೂ ಹೆಚ್ಚು ಜಾಹಿರಾತು ಚಿತ್ರಗಳನ್ನು ತಯಾರಿಸಿದರು. ಅನೇಕ ಡಾಕ್ಯೂಮೆಂಟರಿ ಗಳನ್ನು ತಯಾರಿಸಿದರು. ಇವರು ಎಫ್‍ಟಿಐಐ(1969) ಹಾಗೂ ಭವನ್ಸ್ ಕಾಲೇಜಿನಲ್ಲಿ (1966-73) ಕೆಲಕಾಲ ಬೋಧಿಸಿದರು. ಹೋಮಿ ಬಾಬಾ ಫೆಲೋಷಿಪ್ ಪಡೆದು ಬ್ರಿಟನ್ ಹಾಗೂ ಅಮೆರಿಕ ದೇಶಗಳಲ್ಲಿ ಕೆಲವು ಟಿವಿ ಮಾಧ್ಯಮ ಸಂಸ್ಥೆಗಳಿಗಾಗಿ ಕೆಲಸ ಮಾಡಿದರು. 

	ಅಂಕುರ್ (1973) ಇವರ ಸ್ವತಂತ್ರ ನಿರ್ದೇಶನದ ಮೊದಲ ಚಿತ್ರ. ಈ ಚಿತ್ರ ಹಿಂದಿ ಸಿನಿಮಾ ಕ್ಷೇತ್ರದಲ್ಲಿ ಹೊಸ ಅಲೆ ಸೃಷ್ಟಿಸಿತು. ಚರಣದಾಸ್ ಚೋರ್ (1975), ನಿಶಾಂತ್ (1975), ಮಂಥನ್ (1976), ಭೂಮಿಕಾ (1977), ಜುನೂನ್ (1979), ಕಲಿಯುಗ್ (1980), ಆರೋಹಣ್ (1982), ಮಂಡಿ (1983), ತ್ರಿಕಾಲ್ (1985), ಸೂರಜ್ ಕ ಸಾತ್ವಾ ಘೋಡ (1992)-ಇವು ಇವರ ನಿರ್ದೇಶನದ ಕೆಲವು ಮುಖ್ಯ ಚಿತ್ರಗಳು. ಜುಬೈದ ಇವರ ಇತ್ತೀಚಿನ ಚಿತ್ರ (1998). ಗ್ರಾಮೀಣ ಬದುಕಿನ ಅತ್ಯಂತ ಆಪ್ತಕ್ಷಣಗಳ ವಾಸ್ತವ ದುರಂತಸತ್ಯಗಳನ್ನು ಪ್ರದರ್ಶಿಸಿದ ನಿಶಾಂತ್, ಅಂಕುರ್ ಚಿತ್ರಗಳು ಆಂಧ್ರಪ್ರದೇಶದಲ್ಲೂ ಮಂಥನ್ ಗುಜರಾತಿನಲ್ಲೂ ಚಿತ್ರೀಕರಣಗೊಂಡವು. ಅನಂತರದ ದಿನಗಳಲ್ಲಿ ಅಂದಿನ ಸರ್ಕಾರಗಳು ಗ್ರಾಮೀಣ ಪ್ರದೇಶಗಳ ಪುನರ್‍ವ್ಯವಸ್ಥೆ ಹಾಗೂ ಉದ್ಧಾರಕ್ಕಾಗಿ ನೂತನ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವಷ್ಟರ ಮಟ್ಟಿಗೆ ಪ್ರಖರವಾಗಿ ಈ ಚಿತ್ರಗಳು ಪ್ರಭಾವ ಬೀರಿದುವು. ಇವರ ನೆಹರೂ ಚಿತ್ರಕ್ಕೆ ಇಂಡೋ ಸೋವಿಯತ್ ಸರ್ಕಾರ ಪ್ರಾಯೋಜನೆ ನೀಡಿತು, 53 ಕಂತುಗಳಲ್ಲಿ ನೆಹರೂ ಅವರ ಡಿಸ್ಕವರಿ ಆಫ್ ಇಂಡಿಯ ಕೃತಿಯನ್ನು ಭಾರತ್ ಏಕ್ ಖೋಜ್ ಎಂಬ ಹೆಸರಲ್ಲಿ ದೂರದರ್ಶನಕ್ಕೆ  ನಿರ್ದೇಶಿಸಿದರು. ಇದು ಧಾರಾವಾಹಿಯಾಗಿ ಪ್ರಸಾರವಾಗಿ ಜನಪ್ರಿಯವಾಯಿತು. ಪ್ರಪಂಚದ ಪ್ರಸಿದ್ಧ ಸಣ್ಣಕಥೆಗಳನ್ನು ಆಯ್ಕೆಮಾಡಿಕೊಂಡು ಇವರು ಕಿರುತೆರೆಗೆ ನಿರ್ದೇಶಿಸಿದ ಕಥಾಸಾಗರ್ (1986) ಧಾರಾವಾಹಿ ಕೂಡ ದೂರದರ್ಶನ ನೋಡುಗರ ಮೆಚ್ಚುಗೆ ಗಳಿಸಿತಲ್ಲದೆ ಇವರಿಗೆ ಅಪಾರ ಕೀರ್ತಿ ತಂದುಕೊಟ್ಟಿತು. 

	2002ರ ಅಕ್ಟೋಬರ್ ತಿಂಗಳಲ್ಲಿ ಬ್ರಿಟಿಷ್ ಫಿಲಂ ಇನ್‍ಸ್ಟಿಟ್ಯೂಟ್ ಮೊತ್ತಮೊದಲ ಬಾರಿಗೆ ವಲ್ರ್ಡ್ ಡೈರೆಕ್ಟರ್ಸ್ ಸೀರೀಸ್ ನಲ್ಲಿ ಇವರ ಚಿತ್ರಗಳ ಕುರಿತು ವಿಚಾರ ವಿಮರ್ಶೆ ಪ್ರಕಟಿಸಿತು. ಹಾಗೆಯೇ ಲಂಡನ್ ನ್ಯಾಷನಲ್ ಫಿಲ್ಮ್ ಥಿಯೇಟರ್ ಕೂಡ ಇವರ ಚಿತ್ರಗಳನ್ನು ಪ್ರದರ್ಶಿಸಿದೆ. ಕಳೆದ ಮೂರು ದಶಕಗಳಿಂದ ಇವರು ಕ್ರಿಯಾಶೀಲ ನಿರ್ದೇಶಕರಾಗಿ, ತಮ್ಮ ಚಿತ್ರಗಳ ಮೂಲಕ ಭಾರತೀಯ ಬದುಕಿನ ಅನೇಕ ಮಗ್ಗುಲುಗಳನ್ನು ಶೋಧಿಸುತ್ತ ಭಾರತೀಯ ಚಿತ್ರರಂಗದಲ್ಲಿ ಬುದ್ಧಿಜೀವಿ ನಿರ್ದೇಶಕರೆಂದು ಖ್ಯಾತರಾಗಿದ್ದರೂ ಮಧ್ಯಮವರ್ಗ ಹಾಗೂ ಜನಸಾಮಾನ್ಯರನ್ನು ಮರೆತವರಲ್ಲ. ಇವರ ಕೆಲವು ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲೂ ಯಶಗಳಿಸಿವೆ.	
									(ಜಿ.ಎನ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ